ಕೆಚ್ಚಲು ರೋಗ
ಜಾನುವಾರುಗಳಲ್ಲಿ ಮತ್ತು ಉಳಿದ ಸಸ್ತನಿಗಳಲ್ಲಿ ಕಚ್ಚಲು ಊದಿಕೊಳ್ಳುವ ಪರಿಸ್ಥಿತಿ.  ಈ ರೋಗ ಇದ್ದಾಗ ಹಾಲಿನ ಭೌತ ಮತ್ತು ರಾಸಾಯನಿಕ ಗುಣಗಳು ಬದಲಾಗಿರುತ್ತವೆ.  ಅದರಲ್ಲಿನ ಏಕಾಣುಜೀವಿಗಳ ಸಂಖ್ಯೆ ಸಾಮಾನ್ಯ ಸ್ಥಿತಿಗಿಂತ ಗಣನೀಯವಾಗಿ ಭಿನ್ನವಾಗಿರುವುದು. ಇದಲ್ಲದೆ ರಸಗ್ರಂಥಿ ಅಂಗಾಂಶದ ರಚನೆಯಲ್ಲೂ ತೀವ್ರ ಮಾರ್ಪಾಡು ತಲೆದೋರುತ್ತದೆ.  ಹಾಲಿನಲ್ಲಿ ಮುಖ್ಯವಾದ ಬದಲಾವಣೆ ಬಣ್ಣ ಕೆಡುವುದು ಮತ್ತು ಅದರ ಪದರ ಪದರ ಗಂಟುಗಂಟಾಗಿ ಒಡೆದು ಹೋಗುವುದು.  ಹೇರಳವಾದ ಪ್ರಮಾಣದಲ್ಲಿ ಬಿಳಿ ರಕ್ತಕಣಗಳು ಕಾಣಬರುತ್ತವೆ.  ಕಾಯಿಲೆಯ ಲಕ್ಷಣವಾಗಿ ದನದ ಮೊಲೆ ಊದಿಕೊಂಡು ಶಾಖ ಹೆಚ್ಚಿ, ನೋವುಂಟಾಗಿ ಬಿಗಿತ ಪ್ರಾರಂಭವಾಗುತ್ತದೆ.  ಎಲ್ಲ ಜಾತಿಯ ಜಾನುವಾರುಗಳಲ್ಲಿಯೂ ಕೆಚ್ಚಲು ರೋಗ ಕಂಡುಬರಬಹುದಾದರೂ ಅದರ ಪರಿಣಾಮ ಹೆಚ್ಚು ತೋರಿಬರುವುದು ಹಾಲು ಕರೆಯುವ ಹಸುಗಳಲ್ಲೇ.  ರೋಗದ ದೆಸೆಯಿಂದ ಹೈನು ಉದ್ಯಮದಲ್ಲಿ ಅಪಾರ ನಷ್ಟವನ್ನು ಎದುರಿಸಬೇಕಾಗುತ್ತದೆ.  ದನಗಳ ಸಾವಿನ ನಷ್ಟಕ್ಕಿಂತ ಹೆಚ್ಚಾಗಿ ಹಾಲು ಇಳುವರಿ ಕಡಿಮೆಯಾಗಿ ವರಮಾನ ತಗ್ಗುತ್ತದೆ.

ರೋಗ ಲಕ್ಷಣ:  ಮೊಲೆಗಳು ಬಹಳವಾಗಿ ಊದಿರುತ್ತವೆ.  ರಕ್ತ ನಂಜಾಗಿರುವುದರ ಪರಿಣಾಮವಾಗಿ ಹಾಲು ಉದ್ಭವವಾಗುವ ಮಾಂಸಖಂಡಗಳು ಶಿಥಿಲವಾಗುತ್ತವೆ.  ಇದು ನಮಗೆ ತಿಳಿಯುವ ಮೊದಲೇ ಮಾಂಸದ ಅಂಗದ ಬಹುಭಾಗ ನಾಶವಾಗಿ ಹೋಗಿರುತ್ತದೆ.  ಈ ಸೋಂಕುಳ್ಳ ಹಸುಗಳ ಹಾಲು ಮನುಷ್ಯನಿಗೆ ಅಪಾಯಕಾರಿ.  ಕೆಲವು ವೇಳೆ ಈ ಸೋಂಕು ಮನುಷ್ಯನಿಗೆ ತಗಲುವುದು ಅಸಂಭವವೇನಲ್ಲ.  ಕ್ಷಯ, ಗಂಟಲು ಬೇನೆಗಳು ಹರಡುವಿಕೆಗೆ ಇದು ಕಾರಣವಾಗಬಹುದು.

ರೋಗನಿದಾನ:  ಕೆಚ್ಚಲು ರೋಗದ ಕಾರಣಗಳು ಹಲವಾರು.  ಇದೊಂದು ಸೋಂಕು ರೋಗ.  ಸ್ಟ್ರೆಪ್ಟೋಕಾಕಸ್ ಆಗ್ಲೂಟಿಯ, ಸ್ಟ್ರೆಪ್ ಯುಬೆರಿಸ್, ಸ್ಟ್ರೆಪ್ ಜೂಯೆಪಿಡೆಮಿಕಸ್, ಸ್ಟ್ರೆಪ್ ಡಿಸ್‍ಗೆಲೇಕ್ವಿಯ ಮತ್ತು ಸ್ಟ್ರೆಪ್ ನಿಮೂನಿಯೆ ಇವೇ ಮುಂತಾದವು ಈ ರೋಗದ ಕಾರಕಗಳು.

ಕೆಚ್ಚಲು ರೋಗಕ್ಕೆ ಏಕಾಣುಜೀವಿಗಳು ಕಾರಕಗಳೇ ಎನ್ನುವ ವಿಷಯದಲ್ಲಿ ಅಷ್ಟು ಖಚಿತವಾದ ಅಭಿಪ್ರಾಯವಿಲ್ಲ.  ಏಕೆಂದರೆ ಈ ರೋಗವಿದ್ದ ಕೆಲವು ಸಂದರ್ಭಗಳಲ್ಲಿ ಏಕಾಣುಜೀವಿಗಳ ಪ್ರಭಾವ ಕಂಡುಬಂದಿಲ್ಲ.  ಹಾಗೆಯೇ ರೋಗವಿಲ್ಲದೆಡೆ ಈ ಜೀವಿಗಳು ಇರುವುದು ಕಂಡುಬಂದಿದೆ. ಕೆಚ್ಚಲು ರೋಗದ ಸೋಂಕಿಗೆ ಮುಖ್ಯ ಕಾರಕಗಳು ಎರಡು: ಕಾಯಿಲೆ ತಗುಲಿದ ಕೆಚ್ಚಲು ಮತ್ತು ಅದನ್ನು ಉಲ್ಬಣಿಸುವ ವಾತಾವರಣ.  ಹೈನು ಜಾನುವಾರುಗಳಲ್ಲಿ ಮತ್ತು ಮೇಕೆಗಳಲ್ಲಿ ಪ್ರಧಾನ ಸೋಂಕುಗಳು ಕಚ್ಚಲಲ್ಲಿ ಉಳಿದಿರುತ್ತವೆ.  ವಿಶೇಷವಾಗಿ ಸ್ಟ್ರೆಪ್ ಆಗ್ಲೇಕ್ಟಿಯ ಮತ್ತು ಸ್ಟ್ರೆಪ್ ಅರೆನ್ಸ್ ಈ ರೋಗಗಳು ಹಾಲು ಕರೆಯುವವರ ಕೈಯಿಂದ, ಅವರ ಬಟ್ಟೆಗಳಿಂದ ಮತ್ತು ಹಾಲು ಕರೆಯುವ ಯಂತ್ರಗಳಲ್ಲಿರುವ ಬಟ್ಟಲುಗಳಿಂದ ಬೇರೆ ರಾಸುಗಳಿಗೆ ಹರಡುತ್ತವೆ.  ಕೆಚ್ಚಲು ರೋಗ ಹರಡುವುದಕ್ಕೆ ಅನುಕೂಲ ಸ್ಥಿತಿ ಮೊಲೆ ತುದಿ, ಇಲ್ಲವೇ ಕೆಚ್ಚಲು ಮೇಲಿನ ಗಾಯಗಳು.

ಚಿಕಿತ್ಸೆ:  ಬಂದಿರುವ ರೋಗದ ಹತೋಟಿಗೆ ಅಥವಾ ಮುಂದೆ ಅದರಿಂದ ರಕ್ತ ನಂಜಾಗುವುದನ್ನು ತಡೆಯುವ ಸಲುವಾಗಿ ಹೆಚ್ಚಿನ ಮೊತ್ತದಲ್ಲಿ ಜೀವಿರೋಧಕಗಳು (ಆಂಟಿಬಯೋಟಿಕ್ಸ್) ಅಥವಾ ಸಲ್ಫನಮೈಡ್ ಔಷಧಿಗಳನ್ನು ಕೆಲವು ಗಂಟೆಗಳಿಗೊಮ್ಮೆ ಕೊಡುವುದು ಅಗತ್ಯ.  ಸೂಕ್ತ ಔಷಧಿಯನ್ನು ನೀರಿನ ಲೋಷನ್ ಮಾಡಿಕೊಂಡು ಕೆಚ್ಚಲಿನ ಮೇಲೆ ಸಿಂಪಡಿಸಿ ಅದರ ಸೋಂಕನ್ನು ಕಡಿಮೆ ಮಾಡಬಹುದು.  ಚಿಕಿತ್ಸೆಗೆ ಒಳಪಟ್ಟ ಜಾಗದಲ್ಲಿ ಏಕಾಣುಜೀವಿಗಳು, ಬೂಷ್ಟು, ಯೀಸ್ಟ್ ಮುಂತಾದವು ಸೋಂಕದಂತೆ ಕಟ್ಟುನಿಟ್ಟಾದ ನೈರ್ಮಲ್ಯ ಪಾಲನೆ ಅತ್ಯಗತ್ಯ.  ಗಾಯವನ್ನು ಕೆರಳಿಸುವಂಥ ಔಷಧಿಗಳನ್ನು ಬಳಸಬಾರದು.  ಕೆಚ್ಚಲು ಊತ ಇಳಿಸಲು ಕಾರ್ಟಿಸೋನ್ ಮತ್ತು ಅದರ ಗುಂಪಿಗೆ ಸೇರಿದ ವಸ್ತುಗಳನ್ನು ಬಳಸುವುದುಂಟು.  ಚಿಕಿತ್ಸೆಗೆ ರೋಗಾಣು ಮಾರಕಗಳನ್ನು ಅಥವಾ ಜೀವರೋಧಕಗಳನ್ನು ಉಪಯೋಗಿಸಿದಾಗ ಹಾಲು, ಬೆಣ್ಣೆ, ಮೊಸರುಗಳಲ್ಲಿ ಅವುಗಳ ಅಂಶ ಹೆಚ್ಚಿನ ಮೊತ್ತದಲ್ಲಿ ಇರುವುದು ಅನಿವಾರ್ಯ.  ಇದರಿಂದ ಅವು ಮನುಷ್ಯನ ಸೇವನೆಗೆ ಅನರ್ಹವಾಗುತ್ತವೆ.  ಈ ಚಿಕಿತ್ಸೆ ಮಾಡಿದ ಮುಂದಿನ 72 ಗಂಟೆಗಳ ವರೆಗೆ ಹಾಲು ಮತ್ತಿತರ ಪದಾರ್ಥಗಳನ್ನು ಮನುಷ್ಯನ ಬಳಕೆಗೆ ಒದಗಿಸಬಾರದು.  ಗ್ಲೂಕೋಸಿನೊಡನೆ ಐಸೊಟಾನಿಕ್ ದ್ರವಗಳ ಸೂಜಿ ಮದ್ದು ಮತ್ತು ಆಂಟಿಹಿಸ್ಟೊಮಿನ್ ಔಷಧಿಗಳನ್ನು ಕೊಡಬಹುದು.  ಹಿಮಗಡ್ಡೆಯನ್ನು ಪುಡಿಮಾಡಿ ಕ್ಯಾನ್ವಾಸ್ ಚೀಲದಲ್ಲಿ ಹಾಕಿ ಕೆಚ್ಚಲು ಸುತ್ತ ಕಟ್ಟಿದರೆ ಆ ಪ್ರದೇಶ ಶೀತಲಿಸಿ ನಂಜು ರಕ್ತದೊಳಗೆ ಪಸರುವುದನ್ನು ತಪ್ಪಿಸಬಹುದು. 	   

(ಆರ್.ಎಫ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ